ಚೌಧುರಿ, ಗೋಪಬಂಧು -
1895-1958. ಒರಿಸ್ಸದ ಒಬ್ಬ ಸ್ವಾತಂತ್ರ್ಯಯೋಧ. ಮಹಾತ್ಮ ಗಾಂಧಿಯವರ ಅನುಯಾಯಿ. ಸರ್ವೋ ದಯ ಕಾರ್ಯಕರ್ತ. 1895ರ ಮೇ 8ರಂದು ಕಟಕ್‍ನಲ್ಲಿ ಜನಿಸಿದರು. ತಂದೆ ಗೋಕುಲಾನಂದ ಚೌಧುರಿ, ತಾಯಿ ಪದ್ಮಾವತಿ ದೇವಿ. ಇವರದು ಒರಿಯದ ಕವಿ ಸರಳದಾಸನ ವಂಶವೆಂದು ಹೇಳಲಾಗಿದೆ. ಗೋಪಬಂಧು ಚೌಧುರಿ 1914ರಲ್ಲಿ ಕಲ್ಕತ್ತದ ಪ್ರೆಸಿಡಿನ್ಸಿ ಕಾಲೇಜಿನಿಂದ ಗಣಿತಶಾಸ್ತ್ರದಲ್ಲಿ ಎಂ.ಎ. ಪದವಿ ಗಳಿಸಿದರು. ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮುಂದುವರಿಯಬೇಕೆಂಬುದು ಅವರ ಅಭಿಲಾಷೆಯಾಗಿತ್ತು. ಒಂದನೆಯ ಮಹಾಯುದ್ಧವೂ 1915ರಲ್ಲಿ ತಂದೆಯ ಮರಣವು ಅಡ್ಡಿಯಾದುವು. 1917ರಲ್ಲಿ ನ್ಯಾಯಶಾಸ್ತ್ರದ ಪೂರ್ವ ಪರೀಕ್ಷೆಯಲ್ಲಿ ಅವರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಅದೇವರ್ಷ ಅವರಿಗೆ ಸರ್ಕಾರದಲ್ಲಿ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಹುದ್ದೆ ದೊರಕಿತು.

	1919ರಲ್ಲಿ ಅವರು ಜಾಜ್ ಪುರ ಉಪವಿಭಾಗದಲ್ಲಿ ದ್ವಿತೀಯಾಧಿಕಾರಿಯಾಗಿದ್ದಾಗ ಅಲ್ಲಿ ಪ್ರವಾಹವೂ ಅದರ ಹಿಂದೆಯೇ ಕ್ಷಾಮವೂ ಸಂಭವಿಸಿದುವು. ಅವರು ಸರ್ಕಾರದ ಪರಿಹಾರಾಧಿಕಾರಿಯಾಗಿ ಕೆಲಸ ಮಾಡಿದರು. ಸುಲಭವಾಗಿ ತಲುಪಲಾಗದ ದೂರದೂರದ ಹಳ್ಳಿಗಳಿಗೆಲ್ಲ ಸ್ವಯಂಸೇವಕರೊಡನೆ ಹೋಗಿ ಪೀಡಿತರಿಗೆ ಪರಿಹಾರ ಒದಗಿಸಿದರು. ಇದಕ್ಕಾಗಿ ತಮ್ಮ ಹಣ ಖರ್ಚು ಮಾಡಲು ಕೂಡ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಈ ಕಾರ್ಯದಲ್ಲಿ ಸರ್ಕಾರದ ವಿಳಂಬನೀತಿಯನ್ನು ಬಹಿರಂಗವಾಗಿ ಟೀಕಿಸಿದ್ದರಿಂದ ಮೇಲಿನ ಅಧಿಕಾರಿಗಳ ಅವಕೃಪೆಗೆ ಅವರು ಒಳಗಾದರು. 1921ರಲ್ಲಿ ಅವರಿಗೆ ಸಂಬಲ್‍ಪುರ್ ಜಿಲ್ಲೆಯ ಬಾರ್‍ಗರ್‍ಗೆ ವರ್ಗವಾಯಿತು.

	ಗೋಪಬಂಧು ಚೌಧುರಿಯವರು ಸರ್ಕಾರದ ನೌಕರಿಗೆ ರಾಜೀನಾಮೆ ಇತ್ತು. ಮಹಾತ್ಮಗಾಂಧಿಯವರ ಅಸಹಕಾರ ಆಂದೋಳನ ಸೇರಿದರು. ಕಟಕ್ ಜಿಲ್ಲೆಯ ಜತ್‍ಸಿಂಗ್‍ಪುರದ ಬಳಿ ಸತ್ಯಾಗ್ರಹಿಗಳಿಗೆ ತರಬೇತು ನೀಡಲು ಅಲಕಾ ಆಶ್ರಮ ಸ್ಥಾಪಿಸಿದರು. ಅಲ್ಲಿ 6 ವರ್ಷ ಇದ್ದು ಅದನ್ನು ಮಹಾತ್ಮ ಗಾಂಧಿಯವರ ರಚನಾತ್ಮಕ ಕಾರ್ಯಕ್ರಮದ ಚಟುವಟಿಕೆ ಕೇಂದ್ರವನ್ನಾಗಿ ಬೆಳೆಸಿದರು.

	ಗೋಪಬಂಧು 1924ರಲ್ಲಿ ಕಟಕ್ ಪ್ರಾಂತ್ಯ ಕಾಂಗ್ರೆಸ್ ಅಧಿವೇಶನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ 1927ರವರೆಗೂ ಕಟಕ್ ಜಿಲ್ಲಾ ಮಂಡಳಿಯ ಅಧ್ಯಕ್ಷರಾಗಿ, 1928ರಲ್ಲಿ ವಿಶ್ವೇಶ್ವರಯ್ಯ ಪ್ರವಾಹ ಸಮಿತಿಯ ಸದಸ್ಯರಾಗಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರಕಾರ್ಯದಲ್ಲಿ ಕೆಲಸಮಾಡಿದರು. 1930ರ ಉಪ್ಪಿನ ಸತ್ಯಾಗ್ರಹದಲ್ಲಿ ಅವರು ಬಲಸೋರ್ ಜಿಲ್ಲೆಯ ಇನ್‍ಚುಡಿ ಉಪ್ಪಿನ ಕ್ಷೇತ್ರಕ್ಕೆ ಸಾವಿರಾರು ಸತ್ಯಾಗ್ರಹಿಗಳೊಡನೆ ನಡೆದರು. 1930ರ ಏಪ್ರಿಲ್ 8ರಂದು ಕಟಕ್ ಜಿಲ್ಲೆಯ ಚಂದೋಲ್ ಹತ್ತಿರ ಪೋಲಿಸರ ಅವರನ್ನು ಬಂಧಿಸಿದರು. ಎರಡು ವಾರಗಳ ಅನಂತರ ಅವರು ಬಿಡುಗಡೆಯಾದರೂ ಜೂನ್ 24ರಂದು ಮತ್ತೆ ಬಂಧನಕ್ಕೊಳಗಾಗಿ 10 ತಿಂಗಳ ಕಾರಾಗೃಹ ಶಿಕ್ಷೆ ಅನುಭವಿಸಿದರು. ಗಾಂಧಿ-ಅರ್ವಿನ್ ಒಪ್ಪಂದವಾದ ಮೇಲೆ 1931ರಲ್ಲಿ ಇವರನ್ನು ಬಂಧನದಿಂದ ಬಿಡಲಾಯಿತು. ಮತ್ತೆ 1932ರಲ್ಲೂ 1933ರಲ್ಲೂ ಸರ್ಕಾರ ಇವರನ್ನು ಬಂಧಿಸಿತ್ತು. ಗೋಪಬಂಧುವಿನ ವಯಸ್ಸಾದ ತಾಯಿಯನ್ನುಳಿದು ಅವರ ಕುಟುಂಬದ ಮಿಕ್ಕೆಲ್ಲರೂ ಉಪ್ಪಿನ ಸತ್ಯಾಗ್ರಹ ಸಮಯದಲ್ಲಿ ಬಂಧಿತರಾಗಿದ್ದರು.

	1932ರಲ್ಲಿ ಗೋಪಬಂಧು ಚೌಧುರಿಯವರು ಗಾಂಧಿ ಸೇವಾಸಂಘದ ಸದಸ್ಯರಾದರು. ಮುಂಬಯಿಯಲ್ಲಿ ಸಮಾವೇಶಗೊಂಡ ಭಾರತ ರಾಷ್ಟ್ರೀಯ ಕಾಂಗ್ರೆಸಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಅವರು ಭಾಗವಹಿಸಿದರು. 1934ರಲ್ಲಿ ಬಿಹಾರದ ಭೂಕಂಪದಿಂದ ನೊಂದವರಿಗೆ ಪರಿಹಾರ ಒದಗಿಸುವ ಕಾರ್ಯದಲ್ಲಿ ನಿರತರಾಗಿದ್ದರು.

	1934ರ ಮೇ 9ರಂದು 8ರವರೆಗೆ ಒರಿಸ್ಸದಲ್ಲಿ ಮಹಾತ್ಮ ಗಾಂಧಿಯವರ ಪಾದಯಾತ್ರೆಯಲ್ಲಿ ಅವರ ಜೊತೆಯಲ್ಲಿದ್ದರು. ಆಗಸ್ಟ್ ತಿಂಗಳಲ್ಲಿ ಅವರು ತಮ್ಮ ಕುಟುಂಬದವರೊಡನೆ ಮತ್ತು ಕೆಲವು ಸ್ವಯಂಸೇವಕರೊಂದಿಗೆ ಕಟಕ್ಕಿನ ಬರಿಗ್ರಾಮಕ್ಕೆ ಬಂದು ಗ್ರಾಮ ಪುನರ್ರಚನಾಕಾರ್ಯದಲ್ಲಿ ನಿರತಾರದರು. 

	1938ರಲ್ಲಿ ಪುರಿ ಜಿಲ್ಲೆಯ ದೆಲಾಂಗಿನಲ್ಲಿ ಗಾಂಧಿಸೇವಾಸಂಘದ ನಾಲ್ಕನೆಯ ಸಮ್ಮೇಳನದ ಯಶಸ್ಸಿಗೆ ಇವರ ದುಡಿಮೆ ಕಾರಣ. ಆ ವರ್ಷ ಇವರು ಉತ್ತರ ಪ್ರದೇಶ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಆಯ್ಕೆಹೊಂದಿದರು. 1940ರಲ್ಲಿ ಇವರನ್ನು ನವಜೀವನ್ ಮಂಡಲದ ಅಧ್ಯಕ್ಷರಾಗಿ ಆರಿಸಲಾಯಿತು.

	1942ರ ಆಗಸ್ಟ್‍ನಲ್ಲಿ ಭಾರತದಲ್ಲಿ ನಡೆದ ಚಳವಳಿಯಲ್ಲಿ ಬ್ರಿಟಿಷ್ ಸರ್ಕಾರ ಬರಿ ಗ್ರಾಮಸ್ಥರನ್ನು ದಮನಮಾಡಲು ನಿರ್ಧರಿಸಿ, ಗೋಪಬಂಧು ಅಲ್ಲಿ ನಿರ್ಮಿಸಿದ್ದ ಆಶ್ರಮವನ್ನು ಕೆಡವಿಸಿ, ಗೋಪಬಂಧು ಕುಟುಂಬದವರನ್ನೂ ಆಶ್ರಮದ ಕಾರ್ಯಕರ್ತರನ್ನೂ ಬಂಧಿಸಿತು. ಗೋಪಬಂಧು ಮೂರೂವರೆ ವರ್ಷಕಾಲ ಜೈಲಿನಲ್ಲಿದ್ದರು. ಅವರು ಬಿಡುಗಡೆಯಾದಾಗ ಕೇಂದ್ರ ಮತ್ತು ಪ್ರಾಂತ್ಯಗಳಲ್ಲಿ ಕಾಂಗ್ರೆಸ್ಸು ಸರ್ಕಾರ ರಚಿಸುವ ತೀರ್ಮಾನ ಕೈಗೊಂಡಿತ್ತು. ಗೋಪಬಂಧು ಚೌಧುರಿಯವರು ರಾಜಕೀಯ ಅಧಿಕಾರಕ್ಕೆ ಆಸೆಪಡದೆ ಗಾಂಧಿಯವರ ರಚನಾತ್ಮಕ ಕಾರ್ಯವನ್ನೇ ಮುಂದುವರಿಸಿದರು.

	ಭಾರತ ಸ್ವಾತಂತ್ರ್ಯಾನಂತರ ಮಹಾತ್ಮ ಗಾಂಧಿಯವರ ಕೊಲೆಯಾದಾಗ ಗೋಪಬಂಧುವಿನ ಮನಸ್ಸಿಗೆ ದೊಡ್ಡ ಆಘಾತವಾಯಿತು. ಇವರು ಸರ್ವೋ ದಯ ಪ್ರಚಾರಕ್ಕಾಗಿ ತಮ್ಮ ಜೀವನವನ್ನು ಮುಡುಪಿಟ್ಟರು. 1950ರಲ್ಲಿ ಎರಡನೆಯ ಸರ್ವೋ ದಯ ಸಮ್ಮೇಳನ ಆಂಗುಲ್‍ನಲ್ಲಿ ನಡೆಯಿತು. ತಮ್ಮ ಪತ್ನಿಯೊಡನೆ ಒರಿಸ್ಸದಲ್ಲಿ ಪಾದಯಾತ್ರೆ ಮಾಡಿ ವಿನೋಬಾ ಭಾವೆಯವರ ಭೂದಾನ, ಗ್ರಾಮದಾನ, ಚಳವಳಿಯ ಪ್ರಚಾರ ಮಾಡಿದರು. 1955ರಲ್ಲಿ ವಿನೋಬಾ ಭಾವೆಯವರು ಒರಿಸ್ಸದಲ್ಲಿ ಪಾದಯಾತ್ರೆ ಕೈಗೊಂಡರು. ಆ ಸಮಯದಲ್ಲಿ ವಿನೋಬಾ ಭಾವೆಯವರ ನೇತೃತ್ವದಲ್ಲಿ ಪುರಿಯಲ್ಲಿ ಅಖಿಲ ಭಾರತ ಸರ್ವೋದಯ ಸಮ್ಮೇಳನ ನಡೆಯಿತು. ಈ ಎಲ್ಲ ಚಳವಳಿಗಳಲ್ಲೂ ಶ್ರದ್ಧೆಯಿಂದ ದುಡಿದ ಗೋಪಬಂಧು ಚೌಧುರಿಯವರು ಮೆದುಳಿನ ರಕ್ತಸಾವ್ರದಿಂದ 1958ರ ಏಪ್ರಿಲ್ 29ರಂದು ತೀರಿಕೊಂಡರು.

	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ